Thursday, November 22, 2007

ಬೀಳ್ಕೊಡುವ ದುಃಖ

ಇಂದು ದಾಟ್ಸ್ ಕನ್ನಡ.ಕಂ ನಲ್ಲಿ ತ್ರಿವೇಣಿಯವರ ವಿದಾಯದ ಲೇಖನ ಓದುತ್ತ ಹೀಗನಿಸಿತ್ತು." ಅಳುವುದು ನನಗೆ ಅಸಹ್ಯವೆಂದು ತಿಳಿದಿದ್ದರೂ ಅದು ತಾನೇ ತಾನಾಗಿ ಹೊರಬಿದ್ದ ಘಟನೆಗಳು ಎಷ್ಟೋ? ಮೊದಲ ಸಲ ಅಷ್ಟೊಂದು ನೋವಾಗಿ ಅತ್ತಿದ್ದು ಅಣ್ಣ ಸೈನಿಕ ಶಾಲೆಗೆ ಹೋದಾಗ,ಅಮ್ಮ ಅತ್ತದ್ದನ್ನು ನೋಡಲಾಗದೆ ನಾನು ಮತ್ತೆ ತಂಗಿ ರಾತ್ರಿ ಅಪ್ಪ ಅಮ್ಮರ ಪಕ್ಕ ಆಚೆ ಮುಖ ಮಾಡಿ ಮಲಗಿ ಅತ್ತದ್ದು ಅಪ್ಪನಿಗೆ ಹೇಗೋ ತಿಳಿದು ಬಿಟ್ಟಿತ್ತು. ಅದಾದ ಮೇಲೆ ಅತ್ತಿದ್ದು ನಮ್ಮ ಮನೆಯ ನಾಯಿಗೆ ಹುಶಾರಿರದ ದಿನ.ಆ ಪರಿ ನಾನು,ಅಣ್ಣ ತಂಗಿ ಮೂವರೂ ಅತ್ತಿದ್ದನ್ನು ನೋಡಿ ನಮ್ಮ ಶಾಲೆಯಲ್ಲಿ ಶಿಕ್ಷಕರು ,ಗೆಳತಿಯರು ನಾಯಿ ಎಂಬುದನ್ನು ತಪ್ಪಾಗಿ ತಿಳಿದು ಆಯಿ(ಅಜ್ಜಿ)ಗೆ ಹುಶಾರಿಲ್ಲವೆಂದು ತಿಳಿದಿದ್ದರು. ಮುಂದೆ ೧೦ನೇ ತರಗತಿಯಲ್ಲಿದ್ದಾಗ ಬೀಳ್ಕೊಡುವ ದಿನ ಅವತ್ತು ನನಗೆ ತಿಳಿಯದೆಯೇ ಕಣ್ಣಲ್ಲಿ ನೀರು ಬಂದು ಬಿಟ್ಟಿತ್ತು.ನಾನು ಆ ಪರಿ ಕಿತ್ತಾಡಿ ತೆಗೆದ ೩ ವರ್ಷಗಳು ಆ ಕೊನೆಯ ದಿನಕ್ಕೆ ತದ್ವಿರುದ್ಧವಾಗಿದ್ದವು.ಆಮೇಲೆ ಗೆಳತಿಯರು ನಾನು ತುಂಬಾ ಚೆನ್ನಾಗಿ ಮಾತನಾಡಿದೆ ಎಂದೂ, ನನ್ನ ಭಾವನೆ ನೋಡಿ ಅವರಿಗೆಲ್ಲ ಅಳು ಬಂತೆಂದೂ ಹೇಳುವದನ್ನು ಕೇಳಿ ನನಗೆ ನಾಚಿಕೆ, ನನ್ನ ಬಗ್ಗೆ ಕೀಳರಿಮೆ ಶುರು ಆಗಿತ್ತು.ನಾನು ಹೇಳಿದ್ದು ನಾನು ಅತ್ತಿದ್ದು ಶಾಲೆ ಬಿಟ್ಟು ಹೋಗಲು ಅಲ್ಲ ನನಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದಕ್ಕೆ ಎಂದು ಸಾವರಿಸಿಕೊಂಡೆ .ಆದರೂಈಗ ಅನಿಸುತ್ತೆ ಅಳುವುದು ಮಾನವಸಹಜ ಎಂದು. ಮುಂದೆ ಧಾರವಾಡದಲ್ಲಿ ಒಬ್ಬಳೇ ಇರಬೇಕಾದಾಗ ಅತ್ತಿದ್ದು. ಎಂಜಿನೀಯರಿಂಗ್ ಮುಗಿಸಿ ಬಂದ ದಿನ ಅಷ್ಟೊಂದು ಓಡಾಡಿ ನಮ್ಮೂರಿಗೆ ಹೋಗುವ ದಿನ ಹತ್ತಿರವಯಿತೆಂದು ಖುಷಿಯಿಂದ ಅಪ್ಪನ ಜೊತೆ ಪರೀಕ್ಷೆ ಮುಗಿದ ದಿನವೇ ಓದಿ ಬಂದಿದ್ದೆ.ಆದರೂ ಅವತ್ತು ಬಂದು ನನಗೆ ಅರಿವಿಲ್ಲದೆ ಇಡೀ ರಾತ್ರಿ ಅತ್ತು ಬಿಟ್ಟಿದ್ದೆ.ಮನೆಯಲ್ಲಿ ಯಾರಿಗೂ ನನ್ನನ್ನು ರಮಿಸಲು ಸಾಧ್ಯವಾಗದೇ ಹೋಯಿತು.ಮತ್ತೆ ನನ್ನ ಗೆಳತಿ ಶೈಲಾ ಹಾಸ್ಟೆಲ್ ಬಿಟ್ಟು ವಾಪಸ್ ಊರಿಗೆ ಹೋದ ದಿನ ಕೂಡ ಅಷ್ಟೇ ..ಯಾಕೋ ಅಳುವುದು ಒಂದು ರೀತಿಯ ಹಿತದ ಅನುಭವವೇನೋ ಅನಿಸುವಷ್ಟು ಹತ್ತಿರವಾಯಿತು.ಹೀಗೆ ಕಣ್ಣಿಗೆ ಕಾಣುವ ಕಷ್ಟ ದು:ಖ ನೋಡಿ ಮನಸ್ಸು ದು:ಖಿಯಾಗಿ ಕಹಿಯಾಗಿ, ಖಿನ್ನವಾಗಿ ಅತ್ತ ದಿನಗಳೆಷ್ಟೋ?ಕೆಲವೊಮ್ಮೆ ನನ್ನ ಭ್ರಮೆಯಿಂದಾಗಿರುವ ನೋವಿಗಾಗಿ ಅತ್ತ ಕ್ಷಣಗಳೆಷ್ಟೋ? ಆದರೆ ಅದು ಮನಸ್ಸನ್ನು ಸ್ವಚ್ಛಗೊಳಿಸುವ ಒಂದು ಸರಳ ಮಾರ್ಗವೆಂದು ಈಗ ಅನಿಸುತ್ತಿದೆ.

3 comments:

Jagali bhaagavata said...

ಇದೆಂತ? ಎಲ್ಲ ಕಂಗ್ಲಿಷ್-ನಲ್ಲಿ ಬರ್ದಿದೀರಲ್ಲ?

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಗೀತಾಂಜಲಿ,
ದಯವಿಟ್ಟು ಕನ್ನಡದಲ್ಲಿ ಬರೆಯುತ್ತೀರಾ? ಕನ್ನಡದ ಈ ಒಳ್ಳೆಯ ಲೇಖನಗಳು ಕನ್ನಡ fontನಲ್ಲಿದ್ದರೆ ನಮ್ಮಂಥ ಓದುಗರಿಗೆ ಸುಲುಭವಾಗುತ್ತದೆ. :-)
ಒಳ್ಳೆಯ ಲೇಖನಗಳನ್ನು ಕೊಟ್ಟಿದ್ದೀರ. ಚೆನ್ನಾಗಿವೆ.

Jagali bhaagavata said...

Install baraha direct. It will be easier to write in Kannada.