Thursday, November 22, 2007

ಬೀಳ್ಕೊಡುವ ದುಃಖ

ಇಂದು ದಾಟ್ಸ್ ಕನ್ನಡ.ಕಂ ನಲ್ಲಿ ತ್ರಿವೇಣಿಯವರ ವಿದಾಯದ ಲೇಖನ ಓದುತ್ತ ಹೀಗನಿಸಿತ್ತು." ಅಳುವುದು ನನಗೆ ಅಸಹ್ಯವೆಂದು ತಿಳಿದಿದ್ದರೂ ಅದು ತಾನೇ ತಾನಾಗಿ ಹೊರಬಿದ್ದ ಘಟನೆಗಳು ಎಷ್ಟೋ? ಮೊದಲ ಸಲ ಅಷ್ಟೊಂದು ನೋವಾಗಿ ಅತ್ತಿದ್ದು ಅಣ್ಣ ಸೈನಿಕ ಶಾಲೆಗೆ ಹೋದಾಗ,ಅಮ್ಮ ಅತ್ತದ್ದನ್ನು ನೋಡಲಾಗದೆ ನಾನು ಮತ್ತೆ ತಂಗಿ ರಾತ್ರಿ ಅಪ್ಪ ಅಮ್ಮರ ಪಕ್ಕ ಆಚೆ ಮುಖ ಮಾಡಿ ಮಲಗಿ ಅತ್ತದ್ದು ಅಪ್ಪನಿಗೆ ಹೇಗೋ ತಿಳಿದು ಬಿಟ್ಟಿತ್ತು. ಅದಾದ ಮೇಲೆ ಅತ್ತಿದ್ದು ನಮ್ಮ ಮನೆಯ ನಾಯಿಗೆ ಹುಶಾರಿರದ ದಿನ.ಆ ಪರಿ ನಾನು,ಅಣ್ಣ ತಂಗಿ ಮೂವರೂ ಅತ್ತಿದ್ದನ್ನು ನೋಡಿ ನಮ್ಮ ಶಾಲೆಯಲ್ಲಿ ಶಿಕ್ಷಕರು ,ಗೆಳತಿಯರು ನಾಯಿ ಎಂಬುದನ್ನು ತಪ್ಪಾಗಿ ತಿಳಿದು ಆಯಿ(ಅಜ್ಜಿ)ಗೆ ಹುಶಾರಿಲ್ಲವೆಂದು ತಿಳಿದಿದ್ದರು. ಮುಂದೆ ೧೦ನೇ ತರಗತಿಯಲ್ಲಿದ್ದಾಗ ಬೀಳ್ಕೊಡುವ ದಿನ ಅವತ್ತು ನನಗೆ ತಿಳಿಯದೆಯೇ ಕಣ್ಣಲ್ಲಿ ನೀರು ಬಂದು ಬಿಟ್ಟಿತ್ತು.ನಾನು ಆ ಪರಿ ಕಿತ್ತಾಡಿ ತೆಗೆದ ೩ ವರ್ಷಗಳು ಆ ಕೊನೆಯ ದಿನಕ್ಕೆ ತದ್ವಿರುದ್ಧವಾಗಿದ್ದವು.ಆಮೇಲೆ ಗೆಳತಿಯರು ನಾನು ತುಂಬಾ ಚೆನ್ನಾಗಿ ಮಾತನಾಡಿದೆ ಎಂದೂ, ನನ್ನ ಭಾವನೆ ನೋಡಿ ಅವರಿಗೆಲ್ಲ ಅಳು ಬಂತೆಂದೂ ಹೇಳುವದನ್ನು ಕೇಳಿ ನನಗೆ ನಾಚಿಕೆ, ನನ್ನ ಬಗ್ಗೆ ಕೀಳರಿಮೆ ಶುರು ಆಗಿತ್ತು.ನಾನು ಹೇಳಿದ್ದು ನಾನು ಅತ್ತಿದ್ದು ಶಾಲೆ ಬಿಟ್ಟು ಹೋಗಲು ಅಲ್ಲ ನನಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದಕ್ಕೆ ಎಂದು ಸಾವರಿಸಿಕೊಂಡೆ .ಆದರೂಈಗ ಅನಿಸುತ್ತೆ ಅಳುವುದು ಮಾನವಸಹಜ ಎಂದು. ಮುಂದೆ ಧಾರವಾಡದಲ್ಲಿ ಒಬ್ಬಳೇ ಇರಬೇಕಾದಾಗ ಅತ್ತಿದ್ದು. ಎಂಜಿನೀಯರಿಂಗ್ ಮುಗಿಸಿ ಬಂದ ದಿನ ಅಷ್ಟೊಂದು ಓಡಾಡಿ ನಮ್ಮೂರಿಗೆ ಹೋಗುವ ದಿನ ಹತ್ತಿರವಯಿತೆಂದು ಖುಷಿಯಿಂದ ಅಪ್ಪನ ಜೊತೆ ಪರೀಕ್ಷೆ ಮುಗಿದ ದಿನವೇ ಓದಿ ಬಂದಿದ್ದೆ.ಆದರೂ ಅವತ್ತು ಬಂದು ನನಗೆ ಅರಿವಿಲ್ಲದೆ ಇಡೀ ರಾತ್ರಿ ಅತ್ತು ಬಿಟ್ಟಿದ್ದೆ.ಮನೆಯಲ್ಲಿ ಯಾರಿಗೂ ನನ್ನನ್ನು ರಮಿಸಲು ಸಾಧ್ಯವಾಗದೇ ಹೋಯಿತು.ಮತ್ತೆ ನನ್ನ ಗೆಳತಿ ಶೈಲಾ ಹಾಸ್ಟೆಲ್ ಬಿಟ್ಟು ವಾಪಸ್ ಊರಿಗೆ ಹೋದ ದಿನ ಕೂಡ ಅಷ್ಟೇ ..ಯಾಕೋ ಅಳುವುದು ಒಂದು ರೀತಿಯ ಹಿತದ ಅನುಭವವೇನೋ ಅನಿಸುವಷ್ಟು ಹತ್ತಿರವಾಯಿತು.ಹೀಗೆ ಕಣ್ಣಿಗೆ ಕಾಣುವ ಕಷ್ಟ ದು:ಖ ನೋಡಿ ಮನಸ್ಸು ದು:ಖಿಯಾಗಿ ಕಹಿಯಾಗಿ, ಖಿನ್ನವಾಗಿ ಅತ್ತ ದಿನಗಳೆಷ್ಟೋ?ಕೆಲವೊಮ್ಮೆ ನನ್ನ ಭ್ರಮೆಯಿಂದಾಗಿರುವ ನೋವಿಗಾಗಿ ಅತ್ತ ಕ್ಷಣಗಳೆಷ್ಟೋ? ಆದರೆ ಅದು ಮನಸ್ಸನ್ನು ಸ್ವಚ್ಛಗೊಳಿಸುವ ಒಂದು ಸರಳ ಮಾರ್ಗವೆಂದು ಈಗ ಅನಿಸುತ್ತಿದೆ.

Wednesday, November 14, 2007

ಎಲ್ಲರ ಅಮ್ಮ ಶ್ರೇಷ್ಥಳು

ನಮ್ಮನ್ನು ಹೆತ್ತ ತಾಯಿ ನಮ್ಮ ಭಾಗ್ಯದ ಒಂದು ಭಾಗ. ಇದು ಜಗತ್ತಿನ ಪ್ರತಿ ಜೀವಿಯ ಅನುಭವ. ನಾನು ಚಿಕ್ಕವಳಿದ್ದಾಗ ಅಮ್ಮ ಸ್ವಲ್ಪ ಕಠಿಣವಾಗಿ ಸಿಸ್ತನ್ನು ಕಲಿಸುತ್ತಿದ್ದರು.ಆಗೆಲ್ಲ ಬೇರೆಯವರ ತಾಯಂದಿರು ಅವರನ್ನು ಅಷ್ಟೊಂದು ಸಲುಗೆಯಿಂದ ಬೆಳೆಸಿದ್ದನ್ನು ನೋಡಿ ಅನಿಸುತ್ತಿತ್ತು ಅವರ ಅಮ್ಮ ಒಳ್ಳೆಯವರೆಂದು.ಆದರೆ ನಾನು ದೊಡ್ಡವಳು ಆಗುತ್ತಿದ್ದಂತೆ, ಈ ಜಗತ್ತಿನ ಅನುಭವ ಹೆಚ್ಚಾದಂತೆಲ್ಲ ಈಗ ಅನಿಸುತ್ತಿದೆ ನಾವು ಪಡೆದಿರುವ ತಾಯಿಗಿಂತ ಶ್ರೇಷ್ಠ ತಾಯಿ ಇನ್ನಾರೂ ಸಿಗುವುದಕ್ಕೆ ಸಾಧ್ಯ ಇಲ್ಲವೆಂದು.ಬುದ್ಧಿ ಕಲಿಸಲು ಅವರು ನಮ್ಮ ಜೊತೆ ಕಠಿಣವಾಗಿ ಇದ್ದಿರಬಹುದು ಆದರೆ ನಾವು ಬೆಳೆದು ಬದುಕನ್ನು ಇಷ್ಟು ಹತ್ತಿರದಿಂದ ನೋಡಲು ಕಲಿಸಿ ಅದರ ನಿಜವಾದ ಅರ್ಥ ತಿಳಿಸಲು ಪಟ್ಟ ಕಷ್ಟ ಇಂದು ನನಗೆ ತಿಳಿಯುತ್ತಿದೆ. ಬರೀ ಬಾಹ್ಯ ಸುಖವೇ ಸುಖವಲ್ಲ ಎಂಬುದನ್ನು ಅರುಹಿದ ಪ್ರತಿಯೊಬ್ಬರ ತಾಯಿಯೂ ವಂದನೆಗೆ ಅರ್ಹಳು.ನಮ್ಮ ಅಜ್ನಾನಕ್ಕೆ ನಿಲುಕಿದಷ್ಟೆ ವಿಚಾರದಲ್ಲಿ ನಾವು ಯಾವತ್ತಾದರೂ ತಾಯಿಯನ್ನು ಹೀಯಾಳಿಸಿದ್ದರೆ ಇಂದು ಅದಕ್ಕೆ ಕ್ಷಮೆ ಕೇಳಿ ಬದುಕಿನ ಆನಂದವನ್ನು ಹಂಚಿಕೊಳ್ಳಬೇಕಿದೆ.ಅವರ ನಿಸ್ವಾರ್ಥ ಪ್ರೀತಿಗೆ ಕೃತಜ್ಞತೆ ಸಲ್ಲಿಸಬೇಕಿದೆ. ಇವತ್ತು ಯಾಕೆ ಹೀಗೆ ಅನಿಸುತ್ತಿದೆಯೋ ಗೊತ್ತಿಲ್ಲ .ಆದರೂ ಅಂಥ ಒಂದು ಅರಿವಾದರೂ ನನ್ನಲ್ಲಿ ಮೂಡಿದ್ದು ಒಳ್ಳೆಯ ಹಾದಿಗೆ ನಾಂದಿ ಏನೋ:-)
ಒಂದು ಅರಿವಾದರೂ ಮೂಡಿದ್ದು ಒಳ್ಳೆಯ ಹಾದಿಗೆ ನಾಂದಿ ಏನೋ:-)

Monday, November 12, 2007

ಗೆಳೆತನದ ಸುವಿಶಾಲ ಆಲದಡಿ......

ನನಗೇಕೋ ಈ ಗೆಳೆತನದ ಹುಚ್ಚು ಚಿಕ್ಕಂದಿನಿಂದಲೂ ಸ್ವಲ್ಪ ಅತೀಎನಿಸುವಷ್ಟೇ.ಆಗಲೂ ನಮ್ಮ ಮನೆಯ ಮಾಲೀಕರ ಮಕ್ಕಳಿಗೆ ಅಭ್ಯಾಸ ಮಾಡಲು ಮನೆಗೆ ಕರೆದು ಅವರ ಗೆಳೆತನ ಮಾಡಿಕೊಳ್ಳುತ್ತಿದ್ದೆ.ಶಾಲೆಯಲ್ಲಿ ಅಭ್ಯಾಸದ ವಿಷಯವಾಗಿ ಏನು ಬೇಕೋ ಎಲ್ಲವನ್ನೂ ತೋರಿಸಿ/ಕೊಟ್ಟು ಗೆಳತಿಯರನ್ನು ಮಾಡಿಕೊಳ್ಳುತ್ತಿದ್ದೆ. ಮನೆಗೆ ಎಷ್ಟೋ ಹುಡುಗಿಯರನ್ನ ಕರೆದು ಅಮ್ಮನ ಕೈಯಿಂದ ತಿಂಡಿ ಕೊಡಿಸಿ ಅವರ ಗೆಳೆತನಕ್ಕಾಗಿ ಹವಣಿಸುತ್ತಿದ್ದೆ.ಮನೆಯಲ್ಲಂತೂ ತಂಗಿ, ಅಣ್ಣ ಇದ್ದರು..ಅಪ್ಪ ಸಾಕಷ್ಟು ಸಲುಗೆಯಿಂದಲೇ ಬೆಳೆಸಿದರೂ ಈ ಗೆಳತನದ ಚದುರಂಗ ಬಲಕ್ಕೆ ಅದೆಲ್ಲ ಸಾಟಿಯೇ? ಯಾರ ಜೊತೆಗೋ ಜಗಳ ಆದಾಗ ನನ್ನ ಪರವಹಿಸಲು ಅವರೇ ಬೇಕಿತ್ತು.ಆಟಕ್ಕೆಲ್ಲ ಗುಂಪು ಆದಾಗ ನನ್ನ ಗುಂಪಿನಲ್ಲಿ ಬಲಿಸ್ಥರು ಇರಬೇಕಿತ್ತು.ಸುಳ್ಳು ಹೇಳಿ ಶಾಲೆ ತಪ್ಪಿಸಿ ನದಿ ,ಕೆರೆ, ಬಯಲು, ಕಾಡಿನಂತಿರುವ, ಗಿಡಗಳಿರುವ ಜಾಗಕ್ಕೆ ಹೋಗಲು ಇವರೇ ಬೇಕಿತ್ತು.ನನ್ನ ತಲೆಯಲ್ಲಿರುವ ಎಲ್ಲ ಭ್ರಮೆಗಳಿಗೆ, ಕಲ್ಪನೆಗಳಿಗೆ ಕಿವಿಯೂ ಇವರದೇ ಬೇಕಿತ್ತು..ಇಂತು ಸಾಗಿ ಎಷ್ಟೋ ಜನರನ್ನು ಗೆಳೆಯ ಗೆಳತಿ ಎಂದು ಕರೆಯುತ್ತ ತಿರುಗಿದೇನೆ ಹೊರತು ನಾನು ನಿಜವಾದ ಗೆಳಥಿಯಗಲೇ ಇಲ್ಲ ಎನಿಸುತ್ತದೆ.ಇಲ್ಲದೆ ಹೋದರೆ ನನ್ನ ನೆನಪಾಯಿತೆಂದು ನನ್ನತ್ತ ನೋಡುವ ಜನರೆಷ್ಟು? ನನ್ನಿಂದ ಯಾರಿಗೂ ಏನು ಪ್ರಯೋಜನವೇ ಇಲ್ಲದಂತಾಗಿದೆ. ಇಂಥದ್ದರಲ್ಲಿ ನನ್ನ ಬೇಜಾರು ದಿನೇ ದಿನೇ ಹೆಚ್ಚಾಗಿ ಹುಚು ಹಿಡಿಯುತ್ತಿದೆ. ಹಾಗೆಂತ ನನಗೆ ಉಳಿದಿರುವ ೧-೨ ಜನರಿಗೆ ಫೋನ್ ಮಾಡಿ ಕಷ್ಟ ಕೊಡುವದು ನನ್ನ ದುಸ್ವಾರ್ಥ ಅಲ್ಲವೇ? ಅವರಿಗೆ ನನ್ನಿಂದ ಏನಾಗಬೇಕಿದೆ?ಅವರ ಅಮೂಲ್ಯ ಸಮಯವನ್ನು ನನಗಾಗಿ ಯಾಕೆ ಹಾಳು ಮಾಡಬೇಕು?ಅವರಿಗೆ ತಮ್ಮದೇ ಜೀವನ ಭಾರ ಆಗಿದೆ .ಅವರಿಗಿರುವ ಕರ್ತವ್ಯದ ಭಾರ ಸಾಕಷ್ಟಿದೆ. ಆದರೂ ಅವರು ಮಾತಾಡದೆ ಉಳಿದಾಗ ಆಗುವ ಈ ಅಸಹನೆ ಎಷ್ಟೊಂದು ಯಾತನೆ ನೀಡುತ್ತೆ. ಎಂದು ನಾನು ಇಂಥದೆಲ್ಲ ಮೋಹದಿಂದ ಹೊರಗೆ ಬರುವೇನೋ?ಅಂಥ ದೃಢ ಮನಸ್ಸು ಎಂದು ಹದವಾಗುವದೋ???

Sunday, November 11, 2007

ಯುದ್ಧದ ಹೊರೆ

ಇವತ್ತು ನಾನು "ಸೇವಿಂಗ್ ಪ್ರೈವೇಟ್ ರ್ಯನ್ (Saving private ryan)" ನೋಡ್ತಾ ಇದ್ದೆ. ಅದು ಯುದ್ದದ ಒಂದು ತುಣುಕು. ಅದರಲ್ಲಿ ಒಬ್ಬಾತ ತನ್ನ ೩ ಜನ ಸಹೋದರರನ್ನು ಕಳೆದುಕೊಳ್ಳುತ್ತಾನೆ..ಆದ ಕಾರಣ ಮೇಲಿನ ಅಧಿಕಾರಿಗಳು ಅದು ಹೇಗೋ ಮಾಡಿ ಅವನನ್ನಾದರೂ ಈ ಯುದ್ಹವೆಂಬ ಮರಣದ ಬಲೆಯಿಂದ ದೂರ ತೆಗೆಯಲು ಹುಡುಕುತ್ತಿರುತ್ತಾರೆ..ಇದರ ಸಲುವಾಗಿಯೇ ಅವರು ಮತ್ತಷ್ಟು ಜನ ಸೈನಿಕರನ್ನು ಕಳೆದುಕೊಳ್ಳುತ್ತಾರೆ. ಡಿಸ್ಕವರಿ ಚನ್ನೆಲ್ಲನಲ್ಲಿ ನಲ್ಲಿ ನೈಸರ್ಗಿಕ ನಿಯಮದ ಬಗ್ಗೆ ಏನೋ ಮೂಡಿ ಬರುತ್ತಿತ್ತು.ಅದು ಹೇಗೆ ಆಫ್ರಿಕಾದ ಆನೆಗಳು ಎಷ್ಟೋ ದಿನಗಳವರೆಗೆ ಆ ಸ್ಯಾಂಡ್ ಸ್ಟಾರ್ಮನಲ್ಲಿ ನಡೆದು ಹೋಗಿ ನೀರನ್ನು ಹುಡುಕಬೇಕು , ಮತ್ತೆ ಆ ಪೆನಗ್ವಿನ್ನಗಳು ೫ ತಿಂಗಳ ಕಾಲ ಊಟವಿಲ್ಲದೆ ಎಲ್ಲ ಜೊತೆಯಾಗಿಯೇ ನಿಂತು ಚಳಿಯನ್ನ ತಾಲಿಕೊಳ್ಳಬೇಕು ಎಂಬುದರ ವಿವರಣೆ. ನನಗೆ ಅನಿಸಿದ್ದು.."ನಮ್ಮ ಯುದ್ಧದ ಕೈಗಾರಿಕೆಗಳಿಗಾಗಿ ನಾವು ಬಳಸುತ್ತಿರುವ ನಿಸರ್ಗಿಕ ಸಂಪನ್ಮೂಲಗಳು ಇಂಥ ಎಷ್ಟೋ ಅವಘಡಗಳಿಗೆ ಪ್ರಕೃತಿಯ ಪರ್ಯಾಯ ವ್ಯವಸ್ಥೆ ಇರಬಹುದು.ಅದನ್ನು ನಾವು ಯಾವುದೊ ಒಂದು ಸೇಡಿಗಾಗಿ ಮೂರ್ಖ ವಿಚಾರಕ್ಕಾಗಿ ಬಳಸಿ ಎಷ್ಟೋ ಜೀವಗಳನ್ನು ಬಳಿ ಕೊಡುತ್ತಿದ್ದೇವೆ. ನಾನು ಚಿಕ್ಕವಳಿದ್ದಾಗ ಈ ಮಿಲಿಟರಿಯವರ ಕೆಲಸ ಬರೀ ಯುದ್ಧ ಮಾಡಿಕೊಳ್ಳಲು ಮಾತ್ರ ಇರಬಹುದೇ ಎಂಬ ಸಂಶಯ ಬಂದಾಗಲೆಲ್ಲಾ ನನಗೆ ತಂಪನೆರೆದಿದ್ದು ನಮ್ಮ ಸಿವಿಕ್ಸ್ ಪಾಠ..ಈ ಸೈನ್ಯದ ಅವಶ್ಯಕತೆ ದೇಶದಲ್ಲಿ ತುರ್ತು ಪರಿಸ್ಥಿತಿ ತೋರಿದಾಗ, ನಿಸರ್ಗದ ಆಟಾಟೋಪಗಳು ಹೆಚ್ಚಾದಾಗ ಸಾಕಷ್ಟಿದೆ ಎಂಬುದಾಗಿತ್ತು..ಈಗಲೂ ನಾನು ಯಾವುದೇ ಸೈನಿಕನನ್ನು ನೋಡಿದಾಗ ನನ್ನ ಹಾರೈಕೆ ಆಯಾ ಅಂಥ ಒಂದು ಬಟಾಲ್ಲಿಯನ್ನವನಾಗಿರಲಿ ದೇವರೇ..ಆದರೆ ಆ ಯುದ್ಧ ಭೂಮಿಗೆ ಹೋಗುವ ಅನಿವಾರ್ಯತೆ ಇರದಿರಲಿ ಎಂಬುದು..ಅದೇ ಅಲ್ಲವೇ ಜೀವನ? ಇಲ್ಲಿ ನಮ್ಮನ್ನೆಲ್ಲ ಬೆಚ್ಚಗೆ ಕಾಪಿಟ್ಟು ಈ ಸೈನಿಕರು ತಮ್ಮ ಜೀವವನ್ನೇ ತೆರಲು ಹೊರಡಬೇಕು.. ನಮಗೆ ಈ ನಿಸರ್ಗವಿತ್ತ ಸಂಕಷ್ಟಗಳು ಸಾಲವೇ? ಯಾಕೆ ಮತ್ತೆ ಅಧಿಕಗೊಳ್ಳುತ್ತಿವೆ ಈ ಯುದ್ಧಗಳು? ಎಷ್ಟೋ ಜನರನ್ನು ಬಳಿ ತೆಗೆದುಕೊಂಡರೂ ಅದು ಮುಂದುವರೆಯುತ್ತಿರುವುದು ನನ್ನ ಎದೆಗೆ ಇರಿದಂತಾಗುತ್ತದೆ..ನಾವು ನಮ್ಮ ಅಹಮ್ಮಿನ ಕೋಟೆಯಿಂದ ಈಚೆ ಬಂದು ಎಲ್ಲರೂ ಒಂದೇ ಎಂಬ ಮಾನವತೆಯನ್ನು ಮೆರೆದರೆ ಈ ಜಗತ್ತು ಎಂಥ ಸುಂದರವಾದೀತು?

Saturday, November 10, 2007

ಕ್ಷಣಿಕದ ಚಂಚಲತೆ

ನೆನ್ನೆ ಏನೋ ಒಂದು ವಿಷಯದ ಬಗ್ಗೆ ಅಷ್ಟೊತ್ತು ಗಾಢವಾಗಿ ವಿಚಾರಿಸಿ ಇನ್ನೇನು ಅದನ್ನು ಅಕ್ಷರ ರೂಪದಲ್ಲಿ ಬದಲಾಯಿಸಬೇಕು ಎನ್ನುವಾಗಲೇ, ಹಿಂದಿಂದ ಬಂದ ಸಹೋದ್ಯೋಗಿಯನ್ನು ನೋಡಿ ಒಂದೆರಡು ಮಾತಾಡಿದರಾಯ್ತು ಎಂದು ಅವಳ ಕಡೆ ತಿರುಗಿದೆ. ಅಷ್ಟೇ. ಅದಾದ ಮೇಲೆ ಆ ವಿಚಾರ ಅಷ್ಟೊಂದು ಹೊತ್ತು (ಕನಿಷ್ಠ ೨-೩ ಗಂಟೆ) ನನ್ನ ತಲೆಯನ್ನು ಸುತ್ತುತ್ತಿದ್ದ ಅದು ಮಿಂಚಿನಂತೆ ಮಾಯಾ:-( ಅದಕ್ಕೆ ಇರಬೇಕು ಏನಾದರು ಮಾಡಲು ಧ್ಯಾನ ಬೇಕು, ಏಕಾಂತ ಬೇಕು . ಹೀಗೆ ಎಷ್ಟೊಂದು ಅಮೂಲ್ಯವಾದ ಅವಕಾಶಗಳನ್ನು ಹಾಳು ಮಾಡಿಕೊಂಡಿರುವೇನೋ ಏನೋ? ಈಗಲಾದರೂ ಆ ಏಕಾಗ್ರತೆ ಬರಬಾರದೆ ಎಂದು ಹಪಿಹಪಿಸಿ ಮತ್ತೆ ಕಾಲ ಕಳೆದುಕೊಳ್ಳುತ್ತಿರುವೆ.ಆ ನಿಶ್ಚಲತೆ ಬೇಗ ಕೂಡಿ ಬರಲೆಂದು ತವಕಿಸುತ್ತಿರುವ ಅವಿವೇಕಿ.

Thursday, November 8, 2007

ನಿತ್ಯ ಚೇತನ ಬೆಳಕು ಬೆಳಗಲಿ

ಓಂ ಇವತ್ತು ಬಳಿ ಚಕ್ರವರ್ತಿಯ ವಧೆಯಾದ ದಿನ .ನಾನು ಹುಟ್ಟಿದ ದಿನ(ಈ ಸಾರಿ ನಾನು ಹುಟ್ಟಿದ ಇಂಗ್ಲೀಷ್ ಮತ್ತೆ ಹಿಂದು ಎರಡು ದಿನಗಳು ಸೇರಿವೆ). ಇನ್ಯಾರೋ ಭೂಮಿಯ ಋಣ ಕಡಿದುಕೊಂಡ ದಿನ..ಈ ಬಲಿ ಚಕ್ರವರ್ತಿ, ನಾನು, ಇನ್ಯಾರೋ ಅಂದರೆ ಏನು ? ಇವು ಒಂದೇ ಬಿಂದುವಿನ ನಾಮ, ಸರ್ವನಾಮಗಳಷ್ಟೇ ಅಲ್ಲವೇ?ಇಲ್ಲದಿದ್ದರೆ ಒಬ್ಬರಿಗೆ ಸಂತೋಷ ಕೊಡುವ ದಿನ ಇನ್ನೊಬ್ಬರಿಗೆ ದುಃಖ ಆಗುವದಾದರೂ ಹೇಗೆ? ಹುಟ್ಟಿದ ಮನೆಯೂ ಸೂತಕದ ಮನೆ..ಸತ್ತ ಮನೆಯೂ ಸೂತಕದ ಮನೆ.ನೋಡಿ ಹಿರಿಯರು ಮಾಡಿರುವ ಸಮಷ್ಟಿಯ ವ್ಯಾಖ್ಯಾನ.ಅದೇ ಬದುಕು.ಇದು ಎಂದೂ ಸತ್ಯ ಕೂಡ ಇದೆ. ನಮ್ಮ ಅಜ್ಞಾನದ ಕಣ್ಣಿನಿಂದ ನಾವು ಆ ಸತ್ಯವನ್ನು ಕಾಣಲು ಸಾಧ್ಯವಾಗದೇ ಈ ಬೇಧ ಭಾವನೆಗೆ ಎಡೆ ಮಾಡಿ ಕೊಟ್ಟಿರಬೇಕು. ಆದರೂ ನನಗೆ ಇಂದು ಯಾಕೋ ಆ ಸಮಭಾವದ ಸ್ವಲ್ಪ ಭಾಸವಾದರೂ ಆಗಿದೆ.ತೀರ ಸಮೀಪದ ದೊಡ್ಡಪ್ಪನವರು ಹೊರಟು ಹೋದರು ಎಂದು ಅಣ್ಣ, ತಂಗಿ ಹೇಳಿದಾಗ ಎದೆಯಲ್ಲಿ, ತಲೆಯಲ್ಲಿ, ಯಾವುದೇ ಬದಲಾವಣೆಗಳೇ ಆಗಲಿಲ್ಲ. ಇದು ಸರಿಯೋ ತಪ್ಪೋ ಅಂತೂ ನನ್ನ ಕಣ್ಣಲ್ಲಿ ಇಲ್ಲಿಯವರೆಗೂ ಒಂದು ಹನಿ ನೀರು ಉದುರಿಲ್ಲ. ಅಥವಾ ಬಹುಶ: ನನಗೆ ಇನ್ನು ಅವರ ಅಗಲುವಿಕೆಯ ಅರಿವು ಆಗಿಲ್ಲದೇ ಇರಬಹುದು.ಅಂತೂ ಸಾಗುತ್ತಿದೆ ಕಾಲನ ಯಾತ್ರೆ