Thursday, January 9, 2014

ಇಂದು ನನ್ನ ಸಂಬಂಧಿಯೊಬ್ಬರು ಪ್ರೈಯೋರಿಟಿ ಇದರ ಕನ್ನಡದ ಅನುವಾದ ಏನೆಂದು ಕೇಳಿದರು. ಕನ್ನಡ ಮಾಧ್ಯಮದ ನನಗೆ ಥಟ್ಟನೆ ಹೊಳೆದಿದ್ದು ಆದ್ಯತೆ. ಇದು ಅಷ್ಟು ಸಹಜವಾಗಿ ನನಗೆ ನೆನಪಿಗೆ ಬರಲು ಕನ್ನಡಕ್ಕೆ ನಾನು ಕೊಟ್ಟ ಆದ್ಯತೆಯ ಸ್ಥಾನ ಇರಬೇಕೇನೋ ಎನಿಸಿತು. ಇದರ ಬಗ್ಗೆಯೇ ಚರ್ಚೆ ಮುಂದುವರಿದಾಗ ಅನಿಸಿದ್ದು " ನಾವು ಬಹಳಷ್ಟು ಸಲ ಪ್ರತಿಯೊಂದು ವಸ್ತು, ಮನುಷ್ಯ ಸಂಬಂಧ, ದೇಶ, ಕೆಲಸ, ನಮ್ಮ ಭಾಷೆ ಎಲ್ಲವುಗಳಿಗೆ ನಮ್ಮ ಹೃದಯಕ್ಕೆ ಎಷ್ಟು ಹತ್ತಿರವೋ ಆ ಕ್ರಮದಲ್ಲಿ ಅವುಗಳಿಗೆ ಒಂದು ಸ್ಥಾನ ಕೊಟ್ಟು ಅದರ ಬಗ್ಗೆ ಇರುವ ಪ್ರೀತಿ, ಆಸಕ್ತಿಯನ್ನು ಅದೇ ಕ್ರಮದಲ್ಲಿ ತೋರ್ಪಡಿಸುತ್ತೇವೆ." ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಂದು ವಿಷಯದಲ್ಲಿ ಬಲವಂತವಾಗಿ ನಮ್ಮ ಆದ್ಯತೆಯನ್ನು (ಕರ್ತವ್ಯ ಎನ್ನಬಹುದು) ನಿರ್ವಹಿಸುತ್ತೇವೆ.ಎಷ್ಟೋ ಸಾರಿ ಈ ಆದ್ಯತೆಯನ್ನು ಸರಿಯಾಗಿ ತೂಗಿಸಿಕೊಂಡು ಹೋಗಲು ನಮಗೆ ಗುರಿಯ ಆಕರ್ಷಣೆ ಬೇಕಾಗಬಹುದು , ಅಥವಾ ನಿತ್ಯದ ಅನಿವಾರ್ಯತೆ ನೂಕಬಹುದು. ಇದೆರಡರಲ್ಲಿ ಯಾವದೂ ಇಲ್ಲದೇ ಹೋದರೆ ಅಲ್ಲಿ ನಮ್ಮ ಪ್ರಗತಿ ಕುಂಠಿತವಾಗಬಹುದು, ಇಲ್ಲ ನಮ್ಮ ಜೀವನದ ಮಾರ್ಗವೇ ವಿಮುಖವಾಗಬಹುದು ಇಲ್ಲ ನಾವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಇದು ನಮಗೆ ಎಷ್ಟೋ ಸಾರಿ ಎದುರಾದರೂ ಮತ್ತೆ ಮತ್ತೆ ಇಂಥ ಸಂಧಿಗ್ದಕ್ಕೆ ಸಿಲುಕುತ್ತಲೇ ಇರುತ್ತೇವೆ. ಜೀವನ ಸ್ವಲ್ಪ ಮಟ್ಟಿಗೆ ಅನಿಶ್ಚತೆ ಎನಿಸಿದರೂ ಹೆಚ್ಚಿನ ಸಲ ಈ ಆದ್ಯತೆಯನ್ನು ಮೊದಲೇ ನಿಗದಿಪಡಿಸಿದರೆ ಸಹಾಯವಾಗುತ್ತದೆ ಎನ್ನುವದು ಸಾಮನ್ಯವಾದ ನಂಬಿಕೆ ಮತ್ತು ಅನುಭವ. ಒಂದು ಸಾರಿ ನಾವು ಅದನ್ನು ಪಟ್ಟಿ ಮಾಡಿಟ್ಟ ಮೇಲೆ ಅದರ ರೀತಿ ನಡೆಯುವುದು ಮೊದ ಮೊದಲು ಕಷ್ಟ ಎನಿಸಿದರೂ ಅದರ ಲಾಭ ತಿಳಿಯುತ್ತಿದ್ದಂತೆ ನಾವು ಅದರ ಬೆಂಬಲಿಗರಾಗುತ್ತೇವೆ. ಯಾವುದರ ಆದ್ಯತೆ ಹೆಚ್ಚೋ ಅದಕ್ಕಾಗಿ ನಮ್ಮ ಹೆಚ್ಚಿನ ಶಕ್ತಿ, ವೇಳೆ ಮತ್ತು ಆಸಕ್ತಿಯನ್ನು ಕೊಡಬೇಕಾಗುತ್ತದೆ. ಅದಕ್ಕಾಗಿ ಒಂದೊಂದು ಸಲ ನಾವು ಇಕ್ಕಟ್ಟಿನ ಸ್ಥಿತಿಯಲ್ಲಿ ಬೀಳುತ್ತೇವೆ. ಇಂಥ ಸಮಯದಲ್ಲಿ ನಾವು ಅದರ ಆದ್ಯತೆಯನ್ನು ತಾತ್ಕಾಲಿಕವಾಗಿ ತಗ್ಗಿಸಿ ಮತ್ತೆ ಅದನ್ನು ಮುಂಚೂಣಿಯಲ್ಲಿ ತರಬೇಕು. ಆಗ ಆ ಗುರಿ, ಉದ್ದೇಶ ತನ್ನ ಗುರುತನ್ನು ನಮ್ಮ ಜೊತೆಗೆ ಹಂಚಲು ಶುರು ಮಾಡುತ್ತದೆ.




ನಮೇಲಿನ ವಾಕ್ಯಗಳು ನನ್ನವೇ ಏನೋ ಅನ್ನುವಷ್ಟು ಹಿಂದೆ ಉಳಿದು ಬಿಟ್ಟಿದ್ದೇನೆ ಈ  5ವರ್ಷಗಳಲ್ಲಿ . ಯಾಕೆ ಆಲಸ್ಯತನ ?ಯಾಕೀ ಅಳಕ್ಷ್ಯತೆ ? ಇನ್ನಾದರೂ ಎದ್ದು ಗುರಿ ಮುಟ್ಟುವ ಬಲ ಬರಲಿ.